ಭ್ರಷ್ಟಾಚಾರ, ಮಾಫಿಯಾ, ಕ್ರೈಮ್‌ಗೆ ಇನ್ನೊಂದು ಹೆಸರೇ ಡಿಎಂಕೆ..ಮಹಿಳೆಯರ ಸುರಕ್ಷತೆಯೇ ನಮ್ಮ ಆದ್ಯತೆ ಎಂದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಿದ್ಧವಾಗುತ್ತಿದ್ದು, ಇಂದು (ಶುಕ್ರವಾರ-ಜ.23) ಪ್ರಧಾನಿ ನರೇಂದ್ರ ಮೋದಿ ಎನ್​ಡಿಎ ಪರ ಪ್ರಚಾರಕ್ಕೆ ಚೆನ್ನೈ ಬಳಿಯ ಮಧುರಾಂತಕಂನಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆಯನ್ನು 'ಸಿಎಮ್‌ಸಿ' (Corruption, Mafia, Crime) ಸರ್ಕಾರ ಎಂದು ಕರೆದರು. ತಮಿಳುನಾಡಿನ ಜನರು ಅಂತಹ ಪಕ್ಷದ ಸರ್ಕಾರವನ್ನು ಬೇರುಸಹಿತ ಕಿತ್ತುಹಾಕಿ, ರಾಜ್ಯದಲ್ಲಿನ ಬದಲಾವಣೆಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಈಗ ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಗೆ ಸಂಬಂಧವಿಲ್ಲದ ಸರ್ಕಾರ ಆಡಳಿತ ನಡೆಸುತ್ತಿದೆ, ಡಿಎಂಕೆ ಸರ್ಕಾರ ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿದೆ. ಪಕ್ಷದೊಳಗೆ ಯಾರಾದರೂ ಉದಯಿಸಬೇಕಾದರೆ, ಅವರು ವಂಶಪಾರಂಪರ್ಯ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ನಮ್ಮ ಸಂಸ್ಕೃತಿಯ ಮೇಲಿನ ದೌರ್ಜನ್ಯ ಮೂಲಕ ಮುನ್ನಲೆಗೆ ಬರಬೇಕು ಎಂದರು.
ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ, 2014 ಕ್ಕಿಂತ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಅಧಿಕಾರದಲ್ಲಿತ್ತು, ಯುಪಿಐ ಸರ್ಕಾರ ರಾಜ್ಯಕ್ಕೆ ನೀಡಿದ್ದಕ್ಕಿಂತ ಮೂರು ಪಟ್ಟು ಹಣವನ್ನು ಹೆಚ್ಚು ಹಣವನ್ನು ಎನ್​ಡಿಎ ಸರ್ಕಾರ ನೀಡಿದೆ, ಆದರೆ ಸ್ಟಾಲಿನ್ ಸರ್ಕಾರ ಎಸ್ಸಿ/ಎಸ್ಟಿಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ದಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದರು.

ಮಾಫಿಯಾ, ಕಾನೂನು ಮತ್ತು ಸುವ್ಯವಸ್ಥೆ

ರೈತರು ಮತ್ತು ಮೀನುಗಾರರ ಉನ್ನತಿಗಾಗಿ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತದೆ, ಇತ್ತ ಸ್ಟಾಲಿನ್ ಸರ್ಕಾರದಡಿಯಲ್ಲಿ ಮಾದಕ ದ್ರವ್ಯ ಮತ್ತು ಮದ್ಯ ಮಾಫಿಯಾಗಳು ಸಮೃದ್ಧವಾಗಿವೆ ಬೆಳೆದು ನಿಂತಿವೆ, ಆ ಪಕ್ಷದ ನಾಯಕರು ಮಾದಕ ವಸ್ತು ಮಾಫಿಯಾದೊಂದಿಗೆ ಕೈಜೋಡಿಸಿದ್ದಾರೆ ಎಂಬ ಆರೋಪಗಳಿವೆ. ನೀವು ನಮ್ಮ ಮೈತ್ರಿಕೂಟಕ್ಕೆ ನೀಡುವ ಪ್ರತಿಯೊಂದು ಮತವು ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನೆರವಾಗುತ್ತದೆ ಎಂದರು.
ಸ್ಟಾಲಿನ್ ನೇತೃತ್ವದ ಪಕ್ಷವು ಎರಡು ಬಾರಿ ಬಹುಮತದ ಸರ್ಕಾರ ರಚಿಸಿದರೂ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿರುವ ಪ್ರಧಾನಿ, ತಮಿಳುನಾಡಿನಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕಾಗಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಎನ್‌ಡಿಎ ಅಧಿಕಾರದಲ್ಲಿದ್ದರೆ ಹೂಡಿಕೆಯನ್ನು ಆಕರ್ಷಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಜಯಲಲಿತಾಗೆ ಜೈ

ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾರನ್ನು ಶ್ಲಾಘಿಸಿದ ಪ್ರಧಾನಿ, ಈ ವಿಷಯದಲ್ಲಿ ಡಿಎಂಕೆ ರಾಜ್ಯದ ಮಹಿಳೆಯರ ಪರ ನಿಲ್ಲಲು ಸಂಪೂರ್ಣ ವಿಫಲವಾಗಿದೆ, ಆದರೆ ಹೆಣ್ಣುಮಕ್ಕಳ ಸುರಕ್ಷತೆಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕಾರ್ತಿಕ ದೀಪ ಹಬ್ಬದ ಸಂದರ್ಭದಲ್ಲಿ ಪವಿತ್ರ ದೀಪ ಬೆಳಗಿಸುವ ವಿವಾದವಾದ ಉಲ್ಲೇಖಿಸಿದ ಪ್ರಧಾನಿ, ಬಿಜೆಪಿ ನಾಯಕರು ಭಕ್ತರನ್ನು ಬೆಂಬಲಿಸಿದರೆ, ಇತ್ತ ಡಿಎಂಕೆ ಮತಬ್ಯಾಂಕ್ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಆರೋಪಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net